Blog

  • “ಸೆನ್ಸಿಬಲ್” ರಕ್ಷಿತಾ

    ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ರಕ್ಷಿತಾ ಮಾತನಾಡಿದ ರೀತಿಯೇ ಅವರ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಹೇಳುತ್ತದೆ. ಪ್ರಶ್ನೆ ಕೇಳಿದ ತಕ್ಷಣ ಉತ್ತರಿಸುವ ಆತುರವಿಲ್ಲ. ಮೊದಲು ಆಲೋಚನೆ, ನಂತರ ಮಾತು. ಇವತ್ತು ಹೆಚ್ಚು ಕಾಣದ ಗುಣ ಇದು. ಟ್ರೋಲ್‌ಗಳ ನಡುವೆ ಬೆಳೆದಿಲ್ಲದ, ಆದರೆ ಟ್ರೋಲ್‌ಗಳನ್ನೇ ಮೀರಿಸುವ ಪ್ರೌಢಿಮೆ ಅವರ ಮಾತಿನಲ್ಲಿ ಕಾಣಿಸುತ್ತಿತ್ತು.

    “ನಿಮಗೆ ಬೆಂಬಲ ಕೊಟ್ಟಿದ್ದು ಕರಾವಳಿ ಪ್ರದೇಶದವರೇ?” ಅನ್ನೋ ಪ್ರಶ್ನೆಗೆ, ಅಸ್ಮಿತೆಯ ಗಾಳಿ ತುಂಬಿಕೊಳ್ಳುವ ಅವಕಾಶ ಇದ್ದೇ ಇತ್ತು. ಆದರೆ ಅದನ್ನು ಬದಿಗಿಟ್ಟು “ಇಡೀ ಕರ್ನಾಟಕ” ಅನ್ನೋ ಉತ್ತರ ಕೊಟ್ಟರು. ಆ ಒಂದು ಕ್ಷಣದಲ್ಲಿ ರಕ್ಷಿತಾ ಸ್ಪರ್ಧಿಯಲ್ಲ, ಪ್ರತಿನಿಧಿಯಾಗಿ ಕಾಣಿಸಿಕೊಂಡರು.

    “ಮುಂದೆ ಏನು?” ಅನ್ನೋ ಪ್ರಶ್ನೆಗೆ ಭವಿಷ್ಯದ ಕನಸುಗಳ ಪಟ್ಟಿ ಇರಲಿಲ್ಲ. ಬ್ರ್ಯಾಂಡ್‌, ಸಿನಿಮಾ, ಪ್ರಚಾರದ ಮಾತೂ ಇರಲಿಲ್ಲ. “ಮತ್ತೆ ನನ್ನ ಬದುಕಿಗೆ ಹೋಗ್ತೀನಿ” ಅನ್ನೋ ಸರಳ ಉತ್ತರ ಮಾತ್ರ. ಅದರಲ್ಲಿ ಅಹಂಕಾರವೂ ಇರಲಿಲ್ಲ, ಅಸಮಾಧಾನವೂ ಇರಲಿಲ್ಲ. ನೆಲದ ಮೇಲೆ ಕಾಲಿಟ್ಟಿರುವ ಆತ್ಮವಿಶ್ವಾಸ ಮಾತ್ರ ಇತ್ತು.

    “ನಾನೇ ಗೆದ್ದಂತೆ ಅನಿಸುತ್ತಿದೆ” ಅನ್ನೋ ಮಾತು ಸೋಲಿನ ಸಮಾಧಾನವಲ್ಲ; ಅದು ಜನರ ಪ್ರೀತಿಗೆ ಕೊಟ್ಟ ಗೌರವ. “ನನ್ನನ್ನು ಸುದೀಪ್ ಕೈಗೆ ಒಪ್ಪಿಸುವಷ್ಟು ಜನ ಬೆಂಬಲಿಸಿದ್ದಾರೆ” ಅನ್ನೋ ವಾಕ್ಯದಲ್ಲಿ ಕೃತಜ್ಞತೆ ಇತ್ತು, ಗರ್ವವಲ್ಲ. ತನ್ನ ಮೇಲೆ ಇದ್ದ ವಿಶ್ವಾಸದ ಮಾತು ಹೇಳುವಾಗಲೂ, ಇನ್ನೊಬ್ಬ ಸ್ಪರ್ಧಿಯ ಗೆಲುವನ್ನು ಒಪ್ಪಿಕೊಳ್ಳುವಾಗಲೂ ಅವರ ಧ್ವನಿ ಒಂದೇ ರೀತಿ ಇತ್ತು — ಸಮತೋಲನ.

    ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಹೇಗೆ ನಡೆದುಕೊಂಡರು ಅನ್ನೋದಕ್ಕಿಂತ, ಜನ ಅದನ್ನು ಹೇಗೆ ನೋಡಿದರು ಅನ್ನೋದೂ ಮುಖ್ಯ. ಅವರ ಮಾತು, ಉಚ್ಚಾರಣೆ, ಫಿಲ್ಟರ್ ಇಲ್ಲದ ನಡವಳಿಕೆ — ಎಲ್ಲವೂ ಕೆಲವರಿಗೆ ಅಸಹಜ, ಕೆಲವರಿಗೆ ನಗೆಯ ವಿಷಯ. ಆದರೆ ಅನೇಕರಿಗೆ ಅದೇ ನಿಜವಾದಿಕೆ. ನಟನೆಯಿಲ್ಲದ ಸಹಜತೆ ಯಾವಾಗಲೂ ಗದ್ದಲ ಹುಟ್ಟಿಸುತ್ತದೆ.

    50 ಲಕ್ಷ ಸಿಕ್ಕರೆ ಏನು ಮಾಡ್ತೀರಿ ಅನ್ನೋ ಪ್ರಶ್ನೆಗೆ “20 ಹಸುಗಳನ್ನು ಖರೀದಿಸುತ್ತೇನೆ” ಅನ್ನೋ ಉತ್ತರ ಕಾರ್ಯಕ್ರಮದ ಫಾರ್ಮ್ಯಾಟ್‌ಗೇ ವಿರುದ್ಧವಾದ ಉತ್ತರ. ಅದರಲ್ಲಿ ಗ್ಲಾಮರ್ ಇರಲಿಲ್ಲ, ಆದರೆ ಬೇರು ಇತ್ತು. ಈ ಮಣ್ಣಿನ ವಾಸನೆ ಇತ್ತು.

    ಸಾಮಾನ್ಯ ಹಿನ್ನೆಲೆಯಿಂದ ಬಂದೊಬ್ಬಳು, ಅಸಾಮಾನ್ಯ ವೇದಿಕೆಯಲ್ಲಿ ನಿಂತು, ತನ್ನಂತೆಯೇ ಉಳಿದುಕೊಂಡು ರನ್ನರ್ ಅಪ್ ಆಗಿ ಹೊರಬಂದದ್ದು ಸಾಧನೆ ಮಾತ್ರವಲ್ಲ — ಅದು ಸಾಧ್ಯತೆ. ಎಲ್ಲರಿಗೂ ಅಲ್ಲದಿದ್ದರೂ, ಕೆಲವರಿಗೆ ಆದರೂ ಇದು ಧೈರ್ಯದ ಕಥೆ.

  • Hello world!

    Welcome to WordPress. This is your first post. Edit or delete it, then start writing!